ಮಾಳವಿಕಾ ಸರುಕ್ಕೈ ಅವರು ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ಭರತನಾಟ್ಯದಲ್ಲಿ ಪರಿಣತಿ ಹೊಂದಿರುವ ನೃತ್ಯ ಸಂಯೋಜಕಿ. ಇವರು ೨೦೦೨ ರಲ್ಲಿಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯ ವಿಜೇತರಾದರು. ಇವರಿಗೆ ೨೦೦೩ ರಲ್ಲಿ ಭಾರತ ಸರ್ಕಾರವು ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ನೀಡಿ ಗೌರವಿಸಿತು. == ಜೀವನಚರಿತ್ರೆ == ಮಾಳವಿಕಾ ಸರುಕ್ಕೈ ಅವರು ೧೯೫೯ ರಲ್ಲಿ ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಜನಿಸಿದರು. ಇವರು ತಮ್ಮ ೭ ನೇ ವಯಸ್ಸಿನಲ್ಲಿ ಭರತನಾಟ್ಯವನ್ನು ಕಲಿಯಲು ಪ್ರಾರಂಭಿಸಿದರು ಮತ್ತು ಕಲ್ಯಾಣಸುಂದರಂ ಪಿಳ್ಳೈ (ತಂಜಾವೂರು ಶಾಲೆ) ಮತ್ತು ರಾಜರತ್ನಂ (ವಜುವೂರ್ ಶಾಲೆ) ಅವರಲ್ಲಿ ತರಬೇತಿ ಪಡೆದರು. ಅವರು ಕಲಾನಿಧಿ ನಾರಾಯಣನ್ ಅವರಲ್ಲಿ ಅಭಿನಯವನ್ನು ಮತ್ತು ಪ್ರಸಿದ್ಧ ಗುರುಗಳಾದ ಕೇಲುಚರಣ್ ಮೊಹಾಪಾತ್ರ ಮತ್ತು ರಮಣಿ ರಂಜನ್ ಜೆನಾ ಅವರಲ್ಲಿ ಒಡಿಸ್ಸಿಯನ್ನು ಕಲಿತರು. ಇವರು ತಮ್ಮ ೧೨ ನೇ ವಯಸ್ಸಿನಲ್ಲಿ ಮುಂಬೈಗೆ ಪಾದಾರ್ಪಣೆ ಮಾಡಿದರು. ಭಾರತ ಮತ್ತು ಲಿಂಕನ್ ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್, ನ್ಯೂಯಾರ್ಕ್ವಿ, ಜಾನ್ ಎಫ್. ಕೆನಡಿ ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್ ಚಿಕಾಗೋ ಸೇರಿದಂತೆ ಹಲವು ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಇವರ ಜೀವನ ಮತ್ತು ಕೆಲಸವನ್ನು ಭಾರತ ಸರ್ಕಾರವು ನಿಯೋಜಿಸಿದ ಸಮರ್ಪಣಂ ಎಂಬ ಸಾಕ್ಷ್ಯಚಿತ್ರದ ಮೂಲಕ ದಾಖಲಿಸಲಾಗಿದೆ. ಇವರು ಬಿಬಿಸಿ / ಡಬ್ಲೂ‌‌ಎನ್‌ಇ‌ಟಿ ನ ಒಂಬತ್ತು-ಗಂಟೆಗಳ ದೂರದರ್ಶನ ಸಾಕ್ಷ್ಯಚಿತ್ರದಲ್ಲಿ ಡ್ಯಾನ್ಸಿಂಗ್ ಎಂಬ ಶೀರ್ಷಿಕೆಯಡಿಯಲ್ಲಿ ಕಾಣಿಸಿಕೊಂಡಿದ್ದಾರೆ. ದಿ ಅನ್‌ಸೀನ್ ಸೀಕ್ವೆನ್ಸ್ – ಎಕ್ಸ್‌ಪ್ಲೋರಿಂಗ್ ಭರತನಾಟ್ಯ ಥ್ರೂ ದಿ ಆರ್ಟ್ ಆಫ್ ಮಾಳವಿಕಾ ಸರುಕ್ಕೈ ಅವರ ಕಲೆಯ ಮೇಲೆ ಮಾಡಿದ ಮತ್ತೊಂದು ಸಾಕ್ಷ್ಯಚಿತ್ರವು ಮುಂಬೈ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ಪ್ರದರ್ಶಿಸಲಾಗಿದೆ. == ಪ್ರಶಸ್ತಿಗಳು ಮತ್ತು ಮನ್ನಣೆಗಳು == ಸರುಕ್ಕೈ ಅವರಿಗೆ ೨೦೦೨ ರಲ್ಲಿ ಭಾರತ ಸರ್ಕಾರವು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರು ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಬಿರುದು ಮತ್ತು ಮೃಣಾಲಿನಿ ಸಾರಾಭಾಯ್ ಪ್ರಶಸ್ತಿಯನ್ನು ಪಡೆದರು, ಹಾಗೆಯೇ ನೃತ್ಯಚೂಡಾಮಣಿ ಪ್ರಶಸ್ತಿಯಂತಹ ಇತರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರು ಸಂಸ್ಕೃತಿ ಪ್ರಶಸ್ತಿ ಮತ್ತು ಹರಿದಾಸ ಸಮ್ಮೇಳನ ಪ್ರಶಸ್ತಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರವು ೨೦೦೩ ರಲ್ಲಿ ಪದ್ಮಶ್ರೀ ಎಂಬ ನಾಗರಿಕ ಪ್ರಶಸ್ತಿಯೊಂದಿಗೆ ಮತ್ತೊಮ್ಮೆ ಅವರನ್ನು ಗೌರವಿಸಿತು. == ಸಹ ನೋಡಿ == ಭರತನಾಟ್ಯ ಒಡಿಸ್ಸಿ == ಉಲ್ಲೇಖಗಳು ==